ಮಾಕಲಬ್ಬೆ ಗುಡಿನಿರ್ಮಾಣ ಹಾಗು ಬ್ರಹ್ಮಬೈದರ್ಕಳರ ಮೂರ್ತಿ ಕೆತ್ತನೆ-ಮಾರ್ಗದರ್ಶನ

ಆತ್ಮೀಯರೆ,

            ಮುಂದಿನ ಮೂರು ತಿಂಗಳು ಕಳೆದರೆ ಶ್ರೀ ಕ್ಷೇತ್ರ ಒಟ್ಲದ ಬ್ರಹ್ಮಕಲಶಕ್ಕೆ ಒಂದು ವರ್ಷವಾಗಲಿದೆ. ವಾರ್ಷಿಕೋತ್ಸವದ ಸಂಭ್ರಮದ ಜತೆಗೆ ಬ್ರಹ್ಮಬೈದರ್ಕಳರ ಮೂರ್ತಿ ಪ್ರತಿಸ್ಠಾಪನೆ ನಡೆಯಲಿದೆ. ಇದಕಿಂತಲೂ ಮೊದಲು ಶಕ್ತಿ ದೇವಿಯಾಗಿ, ನೀರ ಝರಿಯ ಮದ್ಯೆ ಸ್ಥಿರವಾಗಿ ಜಲದುರ್ಗೆಯಾಗಿ, ಕಾನನದ ಮದ್ಯೆ ಇದ್ದು ವನದುರ್ಗೆಯಾಗಿ, ಬೈದರ್ಕಳರ ಗರಡಿ ವಿಧ್ಯೆಗೆ ವಿದ್ಯಾದೇವಿಯಾಗಿ, ಗ್ರಾಮದಲ್ಲಿ ಅಂದು ನಡೆಯುತ್ತಿದ್ದ ವೈಭವದ "ಪಯ್ಯೋಳಿ"(ಕತ್ತಿ ವರಸೆ) ಕಾರ್ಯಕ್ರಮದ ಆರಾದ್ಯ ದೇವಿಯಾಗಿಯೂ ತನ್ನ ಅಗೋಚರ ಬಾವಗಳನ್ನು ಅನೇಕ ರೀತಿಯಲ್ಲಿ ಪ್ರಕಟಿಸಿದ್ದರೂ ಪಾಷಾಣ(ಕಲ್ಲು) ರೂಪದಲ್ಲಿ ನಮಗೆ ಅಭಯ ನೀಡುತ್ತಿರುವ "ಮಾಕಲಬ್ಬೆ ದೇವಿ"ಗೆ ಅಲ್ಲಿರುವ ನೈಸರ್ಗಿಕ ಚೆಲುವಿಗೆ ದಕ್ಕೆಯಾಗದಂತೆ ಭವ್ಯವಾದ ಗುಡಿಯ ನಿರ್ಮಾಣ ಆಗಬೇಕು ಎಂಬ ಸಂಕಲ್ಪ ಮಾಡಿದ್ದೇವೆ.

            ಕಳೆದ ವಾರವಷ್ಟೆ ಮೂರ್ತಿಕೆತ್ತನೆಗೆ ಬೇಕಾದ ಮರವನ್ನು ಕಂಕನಾಡಿ ಗರಡಿಗೆ ಸಾಗಿಸುವ ಮೂಲಕ ಕ್ಷೇತ್ರದ ಪರಿಸರದಲ್ಲಿ ಮತ್ತೆ ಸಂಚಲನ ಮೂಡಿಸಿದ್ದೇವೆ. ಅಂದಾಜು ಪ್ರಕಾರ 2017ರ ಪೆಬ್ರವರಿಯ ವೇಳೆಗೆ ತಯಾರಾಗುತ್ತದೆ. ಅಲ್ಲಿಂದ ಭವ್ಯ ಯಾತ್ರೆಯ ಮೂಲಕ ಕ್ಷೇತ್ರಕ್ಕೆ ಬರಬೇಕು. ಅದೊಂದು ಐತಿಹಾಸಿಕ ಕ್ಷಣ ಆಗಬೇಕಾದರೆ ತುಳುನಾಡಿನ ಪ್ರಮುಖ ಸ್ಥಳಗಳ ಮೂಲಕ ತುಳು ವೀರಪುರುಷರ ಮೂರ್ತಿ ಹಾದು ಬರಬೇಕು ಅನ್ನುವ ಅಪೇಕ್ಷೆ ಇದೆ. ಅಪೇಕ್ಷೆಗೆ ತಕ್ಕಂತೆ ಗ್ರಾಮ, ವಲಯ ಹಾಗು ತಾಲೂಕು ಮಟ್ಟದಲ್ಲಿ ಸಮಿತಿಗಳ ಆಯೋಜನೆ ಆಗಬೇಕು. ಕಳೆದ ಬಾರಿ "ತಾಲೂಕು ಮಟ್ಟದ ಹೊರೆಕಾಣಿಕೆ"ಯ ಮೂಲಕ ಜಿಲ್ಲಾಮಟ್ಟದಲ್ಲಿ ಹೆಸರು ಮಾಡಿದ್ದರೆ ಇದೀಗ ಜಿಲ್ಲಾಮಟ್ಟದ ಕಾರ್ಯಕ್ರಮದ ಮೂಲಕ ರಾಜ್ಯದ ಗಮನ ಸೆಳೆಯುವ ಪ್ರಯತ್ನ ಆಗಬೇಕಾಗಿದೆ. ನನ್ನ ಅನುಭವವೂ, ಹಿರಿಯರ ಮಾತಿನ ಪ್ರಕಾರ ಅಸಾಧ್ಯವಾದುದು ಏನೂ ಇಲ್ಲ. ನಮ್ಮ ಸಂಕಲ್ಪಕ್ಕಾಗಿ ಕಾಲ ಇಂದು ಪಕ್ವವಾಗಿದೆ. ಉಳಿದದ್ದು ಆ ದಿಸೆಯಲ್ಲಿ ನಮ್ಮ ಪ್ರಯತ್ನ ಮಾತ್ರ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ.

         ಒಟ್ಲ ಕ್ಷೇತ್ರದ ಬ್ರಹ್ಮಕಲಶದಲ್ಲಿ ನಾವೆಲ್ಲ ಆನನುಭವಿಗಳಾಗಿದ್ದೆವು. ಬೇರೆ ಬ್ರಹ್ಮಕಲಶಗಳಲ್ಲಿ ಚಿಕ್ಕ ಪುಟ್ಟ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರೂ ಅಷ್ಟೊಂದು ಪೂರ್ಣ ಪ್ರಮಾಣದ ಜವಾಬ್ದಾರಿಗಳನ್ನು ತೆಗೆದುಕೊಂಡು, ಅದರಲ್ಲೂ ಶಿಶಿಲ ಗ್ರಾಮ ಮತ್ತು ಕ್ಷೇತ್ರದ ಹೆಸರಿಗೆ ಚ್ಯುತಿ ಬಾರದಂತೆ ತಾಲೂಕು ಮಟ್ಟದ ಭಕ್ತಾದಿಗಳನ್ನು ಸ್ವಾಗತಿಸಿ ಅತಿಥಿ ಸತ್ಕಾರ ಮಾಡಿದ ಸಂತೃಪ್ತಿ ನಮ್ಮದು. ಅನನುಭವ ಮತ್ತು ಸಮಯಾವಕಾಶದ ಕಾರಣ ನೀಡಿ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳನ್ನು ಬಂದ ಭಕ್ತಾದಿಗಳು ಮನ್ನಿಸಿರಲೇಬೇಕು.
         ಆದರೆ ಈ ಬಾರಿ ನಮ್ಮಿಂದ ಭಕ್ತರ ನಿರೀಕ್ಷೆಗಳು ಹೆಚ್ಚಿವೆ ಜತೆಗೆ ನಾವು ಅವರ ನಿರೀಕ್ಷೆಯ ಮಟ್ಟಕ್ಕೆ ಏರುವ, ನಿಭಾಯಿಸುವ ನಮ್ಮ ಜವಾಬ್ದಾರಿಯು ಕೂಡ. ಕಳೆದ ಬಾರಿ‌ ನಡೆದ ಕೆಲವು ಮೈಮರೆವುಗಳು ಈ ಬಾರಿ ನಡೆಯದಂತೆ ಎಚ್ಚರವಹಿಸಬೇಕಿದೆ. ಆ ಬ್ರಹ್ಮಕಲಶದ ವೈಭವ ಒಂದು ಆಕಸ್ಮಿಕ ಅಲ್ಲ ಅದರ ಹಿಂದೆ ಪರಿಶ್ರಮ ಇತ್ತು ಅನ್ನುವುದನ್ನು ದೃಢೀಕರಿಸುವ ಕೆಲಸ ಈ ಬಾರಿ ಆಗಬೇಕು. ಇದೆಲ್ಲ ಆಗಬೇಕಾದರೆ ಮತ್ತೆ ಧನಸಂಗ್ರಹ ಆರಂಭಿಸಬೇಕು,   ಕಳೆದ ಬಾರಿ ಬ್ರಹ್ಮಕಲಶದ ದಿನಗಳ ಖರ್ಚಿಗೆ ತಕ್ಕ ಧನ ಸಂಗ್ರಹವಾಗುವ ನಮ್ಮ ದೊಡ್ಡ ಮಟ್ಟದ ನಿರೀಕ್ಷೆಗಳು ಹುಸಿಯಾಗಿತ್ತು. ಆದುದರಿಂದ ಕೆಲವೊಂದು ಆಕಾಂಕ್ಷೆಗಳನ್ನು ಪೂರೈಸುವಲ್ಲಿ ತೊಡಕಾಯಿತು.  ಹಣದ ಅಭಾವದಿಂದಾಗಿ ಸರಕುಪಟ್ಟಿಗಳು ಪಾವತಿಯಾಗದೆ‌ ಹಾಗೆಯೆ  ಉಳಿದುಕೊಂಡವು.
         ಈ ಬಾರಿ ಜಿಲ್ಲಾಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಿಂದಾಗಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಖರ್ಚಾಗಬಹುದು. ಜೀರ್ಣೋದ್ದಾರದ ಖರ್ಚುಗಳನ್ನು ನೇರ ದಾನಿಗಳ ಮೂಲಕ ಪಡೆಯಲಾಗುತ್ತಿದೆ, ಮೂರ್ತಿ ಪ್ರತಿಷ್ಠಾ ಉತ್ಸವ ಹಾಗು ನೇಮದ ಕಾರ್ಯಗಳಿಗೆ ಬೇಕಾದ ಹಣಸಂಗ್ರಹ ಜತೆಜತೆಗೆ ಕಳೆದ ಬ್ರಹ್ಮಕಲಶದ ಕೊರತೆಗಳನ್ನು ನೀಗಿಸುವುದನ್ನು ಮನಸ್ಸಿನಲ್ಲಿ ಇಟ್ಟು ಈಗಿಂದಲೆ ಕಾರ್ಯೋನ್ಮುಖರಾಗಬೇಕಿದೆ.
          ನಮ್ಮ ಕಾರ್ಯಕ್ರಮಗಳು ಕೇವಲ ತೋರ್ಪಡಿಕೆಗೆ, ಆಡಂಬರಕ್ಕಾಗಿ ಮಾಡದೆ ನಮ್ಮ ಇತಿಹಾಸದ‌ ಹಿರಿಮೆ ಗರಿಮೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವಾಹಕಗಳಾಗಲಿ. ಕ್ಷೇತ್ರದ ಜತೆಗೆ ಗ್ರಾಮದ ಅಭಿವೃದ್ದಿಯಾಗಲಿ, ಜಾತಿ, ಕಟ್ಟಲೆ, ಸಂಪ್ರದಾಯಗಳನ್ನು‌ ಮೀರಿ ನಾವೆಲ್ಲ ಒಂದು ಎನ್ನುವ ಆಶಯಗಳನ್ನು ಸಮಾಜದಲ್ಲಿ‌ ಬಿತ್ತಲು ನೆರವಾಗಲಿ.
              ನಮ್ಮ ಸೀಮಿತ ಪರಿಧಿಯಲ್ಲಿ ಅತಿ ಸಮಂಜಸವಾದ ಕೆಲಸಗಳಿಗೆ ಮಾತ್ರ ಚಾಲನೆ ಕೊಡೊಣ. ಈ ಪುಣ್ಯ ಕಾರ್ಯದಲ್ಲಿ ನಮ್ಮನ್ನು, ನಮ್ಮ ಕುಟುಂಭಿಕರನ್ನು ಮತ್ತು ಗೆಳೆಯರನ್ನು ತೊಡಗಿಸುವ ಮತ್ತ ಪ್ರೇರೇಪಿಸುವ ಮೂಲಕ ಮತ್ತೊಮ್ಮೆ ಬಂದ ಅವಕಾಶದಲ್ಲಿ ತೊಡಗಿಸಿಕೊಂಡು ಮಾಕಲಬ್ಬೆ, ಬ್ರಹ್ಮ ಬೈದರ್ಕಳರು ಹಾಗು ಕ್ಷೇತ್ರದ ಸಮಸ್ತ ಪರಿವಾರ ದೈವಗಳ ಕೃಪೆಗೆ ಪಾತ್ರರಾಗೋಣ.

ಜಯರಾಮ ಪೂಜಾರಿ
ಬಾರ್ತಬಳ್ಳಿ, ಶಿಬಾಜೆ
(ಹಿಂದಿನ ಬ್ರಹ್ಮಕಲಶದ ಅದ್ಯಕ್ಷರು)
ದಿ: 13/12/2016