DEVELOPMENTAL WORK

ಮಾನ್ಯರೇ,
DEVELOPMENTAL WORK
ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಲ್ಲಿ 2016ರ ಮಾರ್ಚ್ 26 ರಿಂದ 30ರ ತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವಗಳು ಸಂಭ್ರಮ ಹಾಗೂ ವಿಜ್ರಂಭಣೆಯಿಂದ ನಡೆದವು. 2015ರ ಜುಲೈ ಆದಿಭಾಗದಲ್ಲಿ ನಡೆದ ಊರವರ ಸಮಾಲೋಚನಾ ಸಭೆಯಲ್ಲಿ ಶ್ರೀ ಧರ್ಮರಸು ಉಳ್ಳಾಕ್ಲು, ರಕ್ತೇಶ್ವರಿ ಚಾವಡಿ,ಶಿರಾಡಿ ದೈವದ ಗುಡಿ, ಬಿರ್ಮರ ಗುಡಿ, ಕೋಡಮಂದಾಯ , ಬಲ್ಲಾಕುಲ ಮಂಟಪ, ತರವಾಡು ಮನೆ ಹಾಗು ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ದಾರದ ಜತೆಗೆ ಕ್ಷೇತ್ರಕ್ಕೆ ಸಂಬಂದಪಟ್ಟ ಮೂರು ನಾಗಬನಗಳನ್ನೂ ಊರ್ಜಿತಗೊಳಿಸುವ ಕಾರ್ಯವನ್ನು ಅಷ್ಠಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ನಡೆಸುವ ನಿರ್ಧಾರ ಮಾಡಲಾಯಿತು. ಇದಕ್ಕಾಗಿ ಕ್ಷೇತ್ರಾಭಿವೃದ್ದಿ ಸಮಿತಿ ರಚಿಸಿ ಸೂಕ್ತ ರೂಪುರೇಷೆಗಳನ್ನು ಕೊಟ್ಟು ಜತೆಗೆ ಹತ್ತಾರು ಜನರ ಸಲಹೆ ಸೂಚನೆಗಳನ್ನು ಅಳವಡಿಸಿದಾಗ ಕ್ಷೇತ್ರವನ್ನು ಕೇವಲ 9ತಿಂಗಳಲ್ಲಿ ಸುಂದರವನ್ನಾಗಿ ರೂಪಿಸುವಲ್ಲಿ ನೆರವಾಯಿತು. ಇದರ ಮದ್ಯೆ ಜೀರ್ಣೋದ್ದಾರದ ಖರ್ಚಲ್ಲಿ ಕ್ಷೇತ್ರಕ್ಕೆ ರಸ್ತೆ ಸಂಪರ್ಕ ಮಾಡಿರುತ್ತೇವೆ. ಬ್ರಹ್ಮಕಲಶವೂ 2016ರ ಮಾರ್ಚಿನಲ್ಲೇ
ಮಾಡಬೇಕೆಂಬ ನಮ್ಮೆಲ್ಲರ ಹಂಬಲ ಹಾಗು ದೈವೇಚ್ಛೆಯಿಂದಾಗಿ ಯೋಗ್ಯ ಸಮಯವೂ ಕೂಡಿಬಂದಿತು.

25ನೇ ಮಾರ್ಚ್ 2016ರ ಸಂಜೆ ಹಿಂದೂ ಜಾಗರಣ ವೇದಿಕೆ ಶಿಶಿಲ, ಶಿಬಾಜೆ, ಅರಸಿನಮಕ್ಕಿ, ರೆಖ್ಯ ಹಾಗೂ ಕೊಕ್ಕಡ ಘಟಕಗಳ ಸಂಯೋಜಕತ್ವದಲ್ಲಿ ಮಾತೆ ದೇಯಿ ಬೈದೆತಿಯ ಕರ್ಮಭೂಮಿ ಪಡುಮಲೆಯ ಗೆಜ್ಜೆಗಿರಿನಂದನಬಿತ್ತಿಲ್ ನಿಂದ ಆರಂಭಗೊಂಡು ಪುತ್ತೂರು,ಉಪ್ಪಿನಂಗಡಿ,ನೆಲ್ಯಾಡಿ ಮಾರ್ಗವಾಗಿ ಶಿಶಿಲದ ಒಟ್ಲ ಗರಡಿಯವರೆಗೆ ನಡೆದ ಬೃಹತ್ ಬೈಕ್ ಜಾಥದೊಂದಿಗೆ ಆರಂಭಗೊಂಡ ಕಾರ್ಯಕ್ರಮಗಳು ಮರುದಿನ ಇತಿಹಾಸದಲ್ಲಿ ಎಂದೂ ಕಂಡುಕೇಳರಿಯದ ತಾಲೂಕು ಮಟ್ಟದ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಶ್ರೀ ಸಂತೋಷ್ ಕಾಪಿನಡ್ಕ ಹಾಗೂ ಶ್ರೀ ಗಣೇಶ್ ನೆಲ್ಲಿಪಲ್ಕೆಯವರ ಮುತುವರ್ಜಿ ಹಾಗು ಕಠಿಣ ಶ್ರಮದಿಂದಾಗಿ ಯಶಸ್ವಿಯಾಗಿ ನೆರವೇರಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 3 ದಿನಗಳ ನಿರಂತರ ವೈಧಿಕ ವಿದಿ ವಿದಾನಗಳ ಜತೆಗೆ 28ನೇ ತಾರೀಕು ಪರಿವಾರ ದೈವಗಳ ಬ್ರಹ್ಮಕಲಶ 3ಕಡೆ ನಾಗ ಪ್ರತಿಷ್ಠೆಗೆ ಅಸಂಖ್ಯಾತ ಭಕ್ತರು ಸಾಕ್ಷಿಯಾಗಿ ದೈವದ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.
ಸಮಾಜದಿಂದ ಸಂಗ್ರಹಿಸಿದನ್ನು ಮತ್ತೆ ಸಮಾಜಮುಖಿಯಾಗಿ ಬಳಸಬೇಕೆಂಬ ಸದುದ್ದೇಶದಿಂದ ದೇಯಿ ಬೈದೆತಿ ಅನ್ನಛತ್ರದಲ್ಲಿ ನಿರಂತರ 5 ದಿನ ಅನ್ನಸಂತರ್ಪಣೆ ಮೂಲಕ ಭಕ್ತರ ಹಸಿವನ್ನು ಇಂಗಿಸುವ ಕಾರ್ಯಗಳು ನಡೆದವು. ಇದೇ ಸಂದರ್ಭದಲ್ಲಿ ಸೌರಭ ಕಾಂಜಬೈದ ಸಭಾಭವನದಲ್ಲಿ ನಡೆದ ನಿರಂತರ ಭಜನೆ, ಧಾರ್ಮಿಕ ಹಾಗು ಸಭಾ ಕಾರ್ಯಕ್ರಮಗಳು ಭಕ್ತರಿಗೆ ಧರ್ಮ ಪ್ರಸರಣಾ ಕಾರ್ಯವನ್ನೂ ಜತೆ ಜತೆಗೆ ಮೂಡಿಬಂದ ಮನೋರಂಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆದು ದಣಿದ ಭಕ್ತರ ಮನಸ್ಸಿನ ನವಉಲ್ಲಾಸ ಕೊಡುವ ಕೇಂದ್ರವಾದವು.
ತಾ 29 ಮತ್ತು 30ರಂದು ನಿರಂತರ 48 ಗಂಟೆಗಳ ಕಾಲ ಪರಿವಾರ ದೈವಗಳು ಹಾಗು ಬ್ರಹ್ಮ ಬೈದರ್ಕಳರಿಗೆ ನೇಮೋತ್ಸವಗಳು ಅದರಲ್ಲೂ ವಿಶೇಷವಾಗಿ ದೇಯಿಬೈದಿತಿಯ ನೇಮೋತ್ಸವ ನಡೆದು ದೈವದ ಅಭಯವನ್ನು ಪಡೆದಾಗ ನಮಗೆ ಮನಸ್ಸಿನಲ್ಲಿ ಏನೋ ಸಾಧಿಸಿದ ಮತ್ತು ಧನ್ಯತಾಭಾವ, ಸಂತೃಪ್ತಿ ನಮ್ಮದಾಗಿದೆ. ಈ ಎಲ್ಲಾ ಯಶಸ್ಸುಗಳು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಸಾನಿಧ್ಯವನ್ನು ಬೆಳೆಸಿ ಮತ್ತಷ್ಟು ಸುಂದರಗೊಳಿಸುವ ನಿಟ್ಟಿನಲ್ಲಿ ಈ ಹಿಂದೆ ಪ್ರಸ್ತಾಪಿಸಿದಂತೆ ಮುಂದೆ ಈ ಕೆಳಗಿನ ಕೆಲಸ ಕಾರ್ಯಗಳನ್ನು ಮಾಡುವ ಯೋಜನೆಗಳಿವೆ.
ಮಾಕಲಬ್ಬೆ ಗುಡಿ ನಿರ್ಮಾಣ
ಕೋಟಿ ಚೆನ್ನಯರ ಮೂರ್ತಿ ಕೆತ್ತನೆ
ದೇಯಿ ಬೈದೆತಿಯ ಗುಡಿ ನಿರ್ಮಾಣ
ಉಳ್ಳಾಕ್ಲು ಆವರಣಕ್ಕೆ ಇಂಟರ್ಲಾಕ್ ಅಳವಡಿಸುವುದು
ಬ್ರಹ್ಮ ಬೈದರ್ಕಳ ಹಾಗು ದೇಯಿಬೈದೆತಿ ಗುಡಿಗೆ ಸುತ್ತ ಆವರಣ ನಿರ್ಮಾಣ
ಬ್ರಹ್ಮ ಬೈದರ್ಕಳ ಹಾಗು ದೇಯಿಬೈದೆತಿ ಆವರಣಕ್ಕೆ ಇಂಟರ್ಲಾಕ್ ಅಳವಡಿಸುವುದು
ಚಾವಡಿ ಹಾಗು ಪರಿವಾರ ದೈವಗಳ ಗುಡಿಗೆ ಸುತ್ತ ಆವರಣ ನಿರ್ಮಾಣ
ಈ ಎಲ್ಲಾ ಜೀರ್ಣೋದ್ದಾರ ಹಾಗು ದೈವೀ ಕಾರ್ಯಗಳ ಜತೆಗೆ ಕ್ಷೇತ್ರವನ್ನು ಸಮಾಜಮುಖಿಯಾಗಿ ಬೆಳೆಸುವ ಹಂಬಲದಿಂದಾಗಿ ವಾರದ ಭಜನೆ, ದೂರದ ಭಕ್ತರಿಗೆ ಹಾಗೂ ವಿಶೇಷವಾಗಿ ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಉಚಿತ ಉಳಕೊಳ್ಳುವ ವ್ಯವಸ್ಥೆ, ಮಾಸಿಕ ಬೈದರ್ಕಳರ ನೇಮೋತ್ಸವದ ಬಗ್ಗೆಯೂ ಆಲೋಚನೆಗಳಿವೆ.
ಹಲವಾರು ದಶಕಗಳಿಂದ ಪಾಲು ಬಿದ್ದು ಜನಮಾನಸದಿಂದ ದೂರವಾಗಿದ್ದ ಕ್ಷೇತ್ರವೊಂದನ್ನು ಕೇವಲ 9 ತಿಂಗಳ ಕಡಿಮೆ ಅವಧಿಯಲ್ಲಿ ಜೀರ್ಣೋದ್ದಾರಗೊಳಿಸಿ ಬ್ರಹ್ಮಕಲಶದಂತಹ ಮಹತ್ಕಾರ್ಯದ ಪ್ರೇರೇಪಣೆಯ ಹಿಂದೆ ಕ್ಷೇತ್ರದ ಪರಿವಾರ ದೈವಗಳು ಹಾಗು ಬ್ರಹ್ಮ ಬೈದರ್ಕಳರ ಅನುಗ್ರಹ ಹಾಗೂ ಊರಪರವೂರ ಆಸ್ತಿಕರ ನೆರವು, ದೂರದೂರಿನ ನೂರಾರು ಕೊಡುಗೈ ದಾನಿಗಳು ಹಾಗು ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸಾಧ್ಯವಾಯಿತು.

ಈ ಸಮಯದಲ್ಲಿ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ತನು, ಮನ,ಧನಗಳ ಸಹಕಾರ ಮತ್ತು ನಿರಂತರ ಪ್ರೋತ್ಸಾಹವನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವೆಂದು ತಿಳಿದು ಕಾರ್ಯಕ್ರಮದ ಸಫಲತೆಯ ಪಾತ್ರದಾರಿಗಳಾದ ತಮಗೆ ಹಾಗೂ ತಮ್ಮ ಕುಟುಂಭಸ್ತರಿಗೆ ಆಯುರಾರೋಗ್ಯ ಐಶ್ವರ್ಯ ಹಾಗು ಸುಖ ಶಾಂತಿಯನ್ನು ಕರುಣಿಸಲೆಂದು ಶ್ರೀ ಶಿಶಿಲೇಶ್ವರ ಹಾಗು ಒಟ್ಲ ಕ್ಷೇತ್ರದ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದರ್ಕಳ ಹಾಗು ಸಮಸ್ತ ದೈವಗಳಲ್ಲಿ ಪ್ರಾರ್ಥಿಸುತ್ತಿದ್ದೇವೆ.