HISTORY

ಶ್ರೀ ಧರ್ಮರಸು ಉಳ್ಳಾಕ್ಲು ಬಹ್ಮ ಬೈದೆರ್ಕಳ ಗರಡಿ, ಒಟ್ಲ

ಪ್ರಕೃತಿಯ ಮನೋರಮವಾದ ತಪ್ಪಲು ಪ್ರದೇಶ. ನೈಸರ್ಗಿಕವಾಗಿ ಪರ್ವತಗಳಿಂದ ಸುತ್ತುವರೆದು ಗಂಗೊಳಿಸಿಸುತ್ತಿರುವ ಕಾರಣಿಕದ ಪುಣ್ಯ ಕ್ಷೇತ್ರವೇ ಶ್ರೀ ಧರ್ಮರಸು ಉಳ್ಳಾಕ್ಲು ಬಹ್ಮ ಬೈದೆರ್ಕಳ ಗರೋಡಿ. ಸ್ಥಳ ಪುರಾಣದ ಪ್ರಕಾರ ದೈವ ಲೆಕ್ಕೆಸಿರಿಯ ತೂಗುಮಂಚ (ತೊಟ್ಟಿಲು) ಆಗಿನ ಒಟ್ಲದ ಯಜಮಾನನ ಆಗಮನದ ಸೂಚನೆಯಂತೆ ತನ್ನಿಂತಾನೆ ತೂಗುತ್ತಿದ್ದರ ಸ್ಥಳ ವಿಶೇಷತೆಯಿಂದಲೂ ಈ ಕ್ಷೇತ್ರವನ್ನು ತೊಟ್ಟಿಲು ಎಂದು ಸಂಭೊದಿಸುತ್ತಿದ್ದರು. ಈ ಸ್ಥಳ ಕ್ರಿ.ಶ. ಸುಮಾರು 1800ರ ಮದ್ರಾಸ್ ಆಡಳಿತದ ಕಾಲದಲ್ಲಿ ತೊಟ್ಲ ಎಂದು ಕರೆಯುತಿದ್ದರು.  (ತೊಟ್ಟಿಲು ಅಪಭ್ರಂಶವಾಗಿ ಕಾಲಕ್ರಮೇಣದಲ್ಲಿ ತೊಟ್ಲ ಎಂದು ಮತ್ತು ಅದರ ಅನ್ವರ್ಥ ನಾಮದೊದಿಗೆ ಪ್ರಸ್ತುತ ಒಟ್ಲ ಎಂದಾಯಿತು).

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಪ್ರವಾಸಿ ಸ್ಥಳ “ಮತ್ಸ್ಯ ತೀರ್ಥ ಪ್ರಖ್ಯಾತ” ಶ್ರೀ ಶಿಶಿಲೇಶ್ವರ ದೇವಸ್ಥಾನ ಮತ್ತು ಅದರ ಜೊತೆಗೆ ಗಮನಾಗಮನ ಸಂಬಂಧ ಹೊಂದಿರುವ ಸುಮಾರು 1000 ವರ್ಷಗಳ ಇತಿಹಾಸ ವಿರುವ ದೈವದ ಕಾರಣಿಕ ಕ್ಷೇತವ್ರೇ ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದೆರ್ಕಳ ಗರೋಡಿ. “ಕುಲಬಾರಿ ಈಶ್ವರೆ ದೆಸಿಲ್ದೇವೆರ್ ತಲಬಾರಿ ದೈವೊಲು ಭೂಮಿ ಉಂಡಾನಗ ಉಂಡಾಯು ಉಳ್ಳಾಕ್ಲು ಉದಿಪಾನ ದೈವೊಂಕ್ಲು ಒಟ್ಲದ ಸತ್ಯೊಲು” ಎಂಬ ಸತ್ಯ ವಾಕ್ಯದ ಒಕ್ಕಣೆಯೊಂದಿಗೆ ಸಾರಮಾನಿ ದೈವಗಳು ನೆಲೆಸಿದ ಕ್ಷೇತ್ರವಿದು.

ಅಂದಿನ ಕಾಲಕ್ಕೆ ಬಹುಸಂಖ್ಯಾತರಾಗಿದ್ದ ಬಿಲ್ಲವ ಸಮಾಜ ಉಚ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಬಿಲ್ಲವ ಜಾತಿಗೆ ಸೇರಿದ ಬಂಗೇರ ಮನೆತನದವರು ಆಳ್ವಿಕೆ ಮಾಡುತ್ತಿದ್ದರು ಎಂದು ದೈವದ ಪಾಡ್ದನಗಳಲ್ಲಿ ಉಲ್ಲೇಖವಾಗಿದೆ. ಇದಲ್ಲದೆ ರಾಜಾಡಳಿತದ ಕುರುಹುಗಳಾದ ಸುತ್ತುಪಡಿವಾರದ ಮನೆ, ಪಟ್ಟದ ಕತ್ತಿ, ಊರಿನ ನ್ಯಾಯ ತೀರ್ಮಾನಕ್ಕಾಗಿ ಧರ್ಮಚಾವಡಿ, ಯೋಧರಿಗಾಗಿ ಗರಡಿ ಶಾಲೆಗಳು ಜೀಣಾವಸ್ಥೆಯಲ್ಲಿದ್ದವು. ಸೀಮೆಯ ಅಧಿಪತಿ ಶ್ರೀ ಶಿಶಿಲೇಶ್ವರನ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಈ ಕ್ಷೇತ್ರದಿಂದಲೇ ದೈವದ ಭಂಡಾರಗಳನ್ನು ತೆಗೆದುಕೊಂಡು ಹೋಗಿ ನೇಮ ನಿಯಮಗಳ ಪಾಲನೆ ಮತ್ತು ಗಣಗಳ ರಾಜ ಈಶ್ವರನ ಬೇಟಿ ಹಾಗು ನರ್ತನ ಸೇವೆ ಮತ್ತು ಪಯ್ಯೋಳಿ ಕಾರ್ಯಕ್ರಮಗಳು ಇದ್ದದ್ದು ಕ್ಷೇತ್ರದ ಹಿರಿಮೆಯನ್ನು ಸೂಚಿಸುತ್ತದೆ. ಜತೆಗೆ ಈ ಎರಡೂ ಕ್ಷೇತ್ರಗಳು ಸರಿಯಾಗಿ ಉತ್ತರ ಮತ್ತು ದಕ್ಷಿಣದ ಭಾಗಗಳಲ್ಲಿರುವುದು ಶಾಸ್ತ್ರೋಕ್ತವಾಗಿ ಗಮನಾಗಮ ಸಂಬಂದವಿರುವುದು ಕಂಡುಬರುತ್ತದೆ.

ಒಟ್ಲ ಕ್ಷೇತ್ರದ ಹಲವಾರು ವಿಶೇಷತೆಗಳೊಂದಿಗೆ ಸುಮಾರು 450ರಿಂದ 500 ವರ್ಷಗಳ ಹಿಂದೆ ಸಾಮಾಜಿಕ ಏಳಿಗೆ ಮತ್ತು ಸತ್ಯಧರ್ಮಗಳ ಉಳಿವಿಗಾಗಿ ಹೋರಾಡಿ ಜನಮಾನಸದಲ್ಲಿ ಅಮರರಾದ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಈ ಕಾರಣಿಕ ಕ್ಷೇತ್ರದಲ್ಲಿ 2007ರ ಅಷ್ಠಮಂಗಳ ಪ್ರಶ್ನೆ ಹಾಗೂ ಪಡುಮಲೆಯಲ್ಲಿ ಕಳೆದ ವರ್ಷ ನಡೆದ ಅಷ್ಠಮಂಗಳ ಪ್ರಶ್ನೆಯಲ್ಲಿ ಸ್ವಷ್ಟಗೊಂಡಂತೆ ಈ ಕ್ಷೇತ್ರಕ್ಕೆ ಪ್ರಾಥಮಿಕ ಗರಡಿ ವಿದ್ಯಾರ್ಜನೆಗೆ ತುಳುನಾಡ ವೀರರು ಕೋಟಿ ಚೆನ್ನಯರು ಬಂದಿದ್ದರು. ಕೋಟಿ ಚೆನ್ನಯರು ಕಾಯ ಬಿಟ್ಟು ಮಾಯ ಸೇರಿದ ಮೇಲೆ ಹಿಂದಿನ ಗರಡಿಯನ್ನೇ ಇವರ ಸ್ಮರಣಾರ್ಥವಾಗಿ ಉಳಿಸಿಕೊಂಡು ಆರಾದನೆ ಮಾಡಿಕೊಂಡು ಬರುತ್ತಿರುವುದು ಕ್ಷೇತ್ರದ ವಿಶೇಷತೆ.

ಈ ಕ್ಷೇತ್ರದಲ್ಲಿ ಪ್ರಧಾನ ಆರಾಧ್ಯ ದೈವ ಲೆಕ್ಕೆಸಿರಿಯಾಗಿದ್ದು, ಇದಕ್ಕೆ ಪೂರಕವಾಗಿ ಚಾವಡಿಯಲ್ಲಿ ತೊಟ್ಟಿಲಲ್ಲಿ ಲೆಕ್ಕೆಸಿರಿ ಸಹಿತ ಪರಿವಾರ ದೈವಗಳ ಸಾನಿದ್ಯ ಸೀಮಿತ ಕಟ್ಟು ಕಟ್ಟಲೆಯೊಂದಿಗೆ ಚಾವಡಿಯೊಳಗೆ ನೇಮೊತ್ಸವ ಮತ್ತು ಧರ್ಮವನ್ನು ಉಳಿಸಿ ಬೆಳೆಸಿಕೊಂಡು ಬರುವುದು ಆಡಂಬರರಹಿತವಾಗಿ ತನ್ನದೆ ಘನತೆ ಗಾಂಭಿರ್ಯದೊಂದಿಗೆ ಸೀಮಿತವಾಕ್ಯದೊಂದಿಗೆ ತನ್ನ ಅಭಯದಾನ ಕೊಡುವುದು ರೂಢಿ, ಲೆಕ್ಕೆಸಿರಿಯೊಂದಿಗೆ ಸತ್ಯಜಾವತೆ, ಕುಳೆ ಬಂಟೆತಿ, ಸಾರಮಾನಿ ದೈವಗಳಿಗೂ ನೇಮೋತ್ಸವ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಇಲ್ಲಿನ ಪ್ರಧಾನ ಶಕ್ತಿಗಳಾದ ಲೆಕ್ಕೆಸಿರಿ ಮತ್ತು ಬ್ರಹ್ಮ ಬೈದೇರುಗಳ  ಅಪ್ಪಣೆಯಂತೆ ವಂಶಪರಂಪರೆಯಾಗಿ ಯಜಮಾನ ಗಡಿ ಪ್ರಧಾನ ನಡೆಯುತ್ತದೆ•ಪ್ರಸ್ತುತ ಶ್ರೀ ಜನಾರ್ಧನ ಬಂಗೇರವರು ಗಡಿ ಪಟ್ಟವಾದ ಯಜಮಾನರಾಗಿದ್ದಾರೆ

ಧರ್ಮರಸು ಉಳ್ಳಾಕ್ಲು ಸಂಧಿಯ ಪ್ರಕಾರ ಕೃಲಾಸ (ಕಂಚಿದೇಸ) ದಲ್ಲಿದ್ದ ಐವರು ಕುಮಾರರು ಯೌವನಾವಸ್ಥೆ ಹೊಂದಿದ ಮೇಲೆ ಲೋಕವಿಹಾರಕ್ಕಾಗಿ ದಕ್ಷಿಣದ ಕಡೆ ಹೊರಟಾಗ ಕುಮಾರ ಪರ್ವತದ ಮೇಲೆ ಇಳಿದು, ಗಣಗಳ ರಾಜ ಈಶ್ವರ ದೇವರ ಪ್ರಾರ್ಥನೆಗೆ ಮೈ ಶುದ್ದಿ ಜಳಕಕ್ಕಾಗಿ, ಅವರಿಗೆ ಕಂಡಿದ್ದು 3 ಕಯಗಳು. ಮೀನುಗುಂಡಿ ಕಯವನ್ನು ದೇವರ ಜಳಕಕ್ಕೂ, ಕುದುರೆ ಕಯವನ್ನು ರಾಜಾಡಳಿತದ ಕುದುರೆಗಳ ಆರೈಕೆಗಾಗಿ ಮೀಸಲಿರಿಸಿ ತಮಗಾಗಿ ಒಟ್ಲದ ಕಯವನ್ನು ಆರಿಸಿಕೊಳ್ಳುತ್ತಾರೆ. ಮಂಡಲವನ್ನು ಮಾಡಿ ತಮ್ಮ ಆಭರಣಗಳನ್ನು ತ್ಯಜಿಸಿ ಅದರಲ್ಲಿ ಇಟ್ಟಾಗ ಅದು ಅಕಾಶ ಮಾರ್ಗದಲ್ಲಿ ಬೆಳ್ಳಿಯ ಬೆಳಕಾಗಿ ಸಮಚರಿಸುತ್ತದೆ. ಈ ವಿಸ್ಮಯವನ್ನು ಕಂಡ ಆಗಿನ ಸೌರಭ ಕಾಂಜ ಬೈದ ಅಂತಹ ವಿಶೇಷವಾದ ದೈವವಾಗಿದ್ದರೆ ನನ್ನ ಧರ್ಮದ ಕೈ ಹಿಡಿದು ನನ್ನ ಬಳಿ ಬರಲಿ ಎಂದು ಪ್ರಾರ್ಥಿಸಿದಾಗ ಅವನ ಭಕ್ತಿಗೆ ಮೆಚ್ಚಿ ಧರ್ಮರಸು ಉಳ್ಳಾಕ್ಲು ಎಂದೆನಿಸಿ ಮೂಲಸಾನಿದ್ಯವಾಗಿ ಬಾಲೆ ಕುಮಾರೆ, ಮಹಿಷಂತಾಯ, ಪಂಜಿರ್ಲಿಗಳ ಜೊತೆ ನೆಲೆಯಾಗುತ್ತಾರೆ.

ಮತ್ತೊಂದು ದೈವದ ನೆಲೆ ಶೀರಾಡಿ ದೈವೊಂಕುಲು ಗ್ರಾಮದೈವವಾಗಿ ಇಲ್ಲಿ ನೆಲೆಯಾಗಿದೆ. ಸಂಧಿಯಲ್ಲಿ ಹೇಳಿದಂತೆ ಘಟ್ಟ ಇಳಿದು ಕಾರ್ನಿಕದ ಕುಮಾರರು ಶಿರಾಡಿ ಬಳಿ (ಕುಮಾರಧಾರ ನದಿಯಲ್ಲಿ) ಜಳಕ್ಕಿಳಿದು ಶುಚಿಗೊಂಡ ಸಮಯದಲ್ಲಿ ಸುಬ್ರಹ್ಮಣ್ಯ ದೇವರ ದರ್ಶನ  ಪಡೆದು ಹಿಂದುರುಗುತ್ತಿದ್ದ ಅಜಿರಡ್ಕದ ಬಾರಿಕೆಯ ಬಲ್ಲಾಳ ದಂಪತಿಗಳ ಬೇಟಿಯಾಗುತ್ತದೆ. ಘಟ್ಟದಿಂದ ಬಂದವರು ನಾವು ನಮಗೆ ನೆಲೆ ಬೇಕೆಂದು ಕೊರಿದಾಗ ದಯಾಳು ಧರ್ಮಾತ್ಮರಾದ ಬಲ್ಲಾಳ ದಂಪತಿಗಳು ತಮ್ಮ ಬೆನ್ನ ಹಿಂದೆ ತಮ್ಮನ್ನು ಅನುಸರಿಸುವಂತೆ ಕೋರಿದರು. ಇದಾದ ನಂತರ ಅಜಿರಡ್ಕದಲ್ಲಿ ನೆಲೆನಿಂತು ಜನನದೈವವೆಂದು ಪಾಳಿಸಿಕೊಂಡು ಬರುತ್ತಾರೆ. ಕಾಲಕ್ರಮದಲ್ಲಿ ಬಲ್ಲಾಳರ ಹೆಂಡತಿ ಬೀರಕ್ಕೆ ಮದಿಮಾಲ್ಗೆ ಯವರಿಗೆ ಕುತ್ತಿಗೆಯಲ್ಲಿ ಗಂಡಮಾಲೆ ಬರುತ್ತದೆ. ಅದು ಗುಣಮುಖವಾದರೆ ತಾನುಂಡ ಬಟ್ಟಲನ್ನು ಕರಗಿಸಿ ದೈವಕ್ಕೆ ಕಂಚಿನ ಮೊಗ, ಬಂಗಾರದ ನಾಲಗೆ ಒಪ್ಪಿಸುತ್ತೇನೆ ಎಂದು ಹರಕೆ ಹೊರುತ್ತಾಳೆ ಮತ್ತು ವೈದ್ಯನಾಗಿದ್ದ ಬಡ್ಲ ಬಾರಿಕೆ ಬಿರ್ಮನ ಬೈದನನ್ನು ಔಷದಕ್ಕಾಗಿ ಕರೆಸಿ ಅವನ ಶುಶ್ರೂಷೆಯಿಂದ ಗಂಡಮಾಲೆ ರೋಗ ಕಡಿಮೆಯಾಗುತ್ತದೆ. ಕಾಲಕ್ರಮೇಣ ದೈವಕ್ಕೆಕೊಟ್ಟ ಮಾತನ್ನು ಮರೆತ ಬೀರಕ್ಕೆ ಮಾದಿಮಾಲ್ನ ಹೆದೆಯ ಭಾಗದಲ್ಲಿ ಗಡ್ಡೆಯೊಂದು ಕಂಡುಬಂದು ಅತೀವ ನೋವುಂಟುಮಾಡುತ್ತದೆ. ದೈವಚೋದ್ಯವನ್ನು ಗಮನಿಸಿದ ಬೀರಕ್ಕೆ ಮತ್ತೆ ಬೀರನ್ನ ಬೈದನಿಗೆ ಓಲೆ ಕಲಿಸಿ, ಕರೆತರಿಸಿ ಮದ್ದು ಮಾಡಲು ಹೇಳುತ್ತಾಳೆ. ಈ ಸಂದರ್ಭವನ್ನು ಬಳಸಿಕೊಂಡ ದೈವ, ಬೀರನ್ನ ಬೈದ ಕಾಡಿನಲ್ಲಿ ಗಿಡಮೂಲಿಕೆ ಬೇರುಗಳನ್ನು ಸಂಗ್ರಹಿಸುವಾಗ ಅದರಲ್ಲಿ ಕನ್ನಡಿ ಹಾವಿನ ವಿಷವಾಗಿ ಸೇರಿಕೊಂಡು ಅವಳನ್ನು ಕೊಂದು ಮಾತುತಪ್ಪಿದಕ್ಕಾಗಿ ತನ್ನ ದ್ವೇಷವನ್ನು ವ್ಯಕ್ತಪಡಿಸಿತು. ಮತ್ತು ಬಿರ್ಮನ್ನ ಬೈದನ ಹಿಂದೆ ಬಡ್ಲದಲ್ಲಿ ನೆಲೆಕಂಡಿತು. ತನ್ನ ಮದ್ದು ಫಲಿಸದ ಕೊರಗಿನಲ್ಲಿ ಬಿರ್ಮನ್ನ ಬೈದನ ಅಂತ್ಯವಾದಗ ದೈವ ಆಗಿನ ಕಾಲಕ್ಕೆ ರಾಜಾಶ್ರಯಕ್ಕಾಗಿ ಒಟ್ಲದ ಮಣ್ಣಲ್ಲಿ ನೆಲೆಯಾಗಿ ಪರಿಹಾರ ಸಮಸ್ತರಾಗಿ ಗ್ರಾಮದೈವ ಎಂದು ಆರಾಧಿಸಿಕೊಂಡು ಬಂದರು ಎಂಬುವುದು ತಿಳಿದುಬರುತ್ತದೆ. ಶಿರಾಡಿ ದೈವ  (ಅಮ್ನೂರು)ದೊಂದಿಗೆ ಪರಿಹಾರ ದೈವಗಳಾದ ಬಿರ್ಮೆರ್, ಅಕ್ಕ ಬಾಲಂಗದೈಯಾರು, ಕುಕ್ಕುಲದ ಪಂಜುರ್ಲಿ, ಗಿಳಿರಾಮೆ, ಬಂಟೆ, ಬೇಡವೆ, ಅಡಿಮಾರಾಂಡಿ, ಪೊಟ್ಟೊಲು, ಬಚ್ಚನಾಯಕೆ, ಮಂಗಳೆರ್, ಮದಿಮಾಳ್, ಕರಿಯ ನಾಯಕೆರ ಸಾನಿಧ್ಯವಿರುವುದು ಈ ಕ್ಷೇತ್ರದ ವಿಶೇಷ.

ಹರಕೆಯನ್ನು ತೀರಿಸದ ಇಪ್ಪೋಳಿ ಮುದ್ಧನನ್ನು ಹತ್ತಿರದ ಅಜಿರಡ್ಕದಲ್ಲಿದ್ದ ಬಾರಿಕೆಯ ಬಲ್ಲಾಳರಿಗೆ ಸಂಬಂದಪಟ್ಟ ಹಸುವನ್ನು ಕರ್ಪು(ಗುಂಡಿಗೆ) ಹಾಕಿ ಕೊಂದ ಅರೋಪದಲ್ಲಿ ರೆಖ್ಯ ಬಾರಿಕೆ ಪೆರ್ಬೆರರ ಜೊತೆಗೂಡಿ ಅವನ ರುಂಡ ಕಡಿಯುವ ಶಿಕ್ಷೆ ಕೊಡುವ ತೀರ್ಮಾಣವಾಗುತ್ತದೆ. ರುಂಡ ಕಡಿದ ಕೂಡಲೇ ಅದು ರೆಖ್ಯದ ಬಾರಿದ ಪೆರ್ನೆರ ಬಾವಿಗೆ ಹೋಗಿ ಬಿತ್ತು ಉಳಿದಂತೆ ಖಾಲಿ ಮುಂಡವನ್ನು ಮೆರೆವಣಿಗೆ ಮೂಲಕ ರೆಖ್ಯಗೆ ವಿಜಯೋತ್ಸಬದೊಂದಿಗೆ ಸಾಗಿಸಿ ಕಾರ್ಯಗಳನ್ನು ಮುಗಿಸಲಾಯಿತು. ಕ್ರಮೇಣ ಬಾವಿಯೋಳಗಿಂದ ವಿಚಿತ್ರ ಸ್ವರಗಳೂ ಕೇಳತೊಡಗಿದಾಗ ಅದು ಶಿರಾಡಿ ಬೂತವನ್ನು ಆರಾದಿಸಬೇಕೆಂದು ಕಂಡುಬಂತು.

ದೂರದ ಕಲ್ಲಾಜೆಯಲ್ಲಿ ನೆಲೆಸಿರುವ ಹುಲಿ ಚಾಮುಂಡಿ ದೈವದ ಅಂಶಿಕವಾಗಿ ಕ್ಷೇತ್ರದಲ್ಲಿರುವ ಪಿಲಿಕಲ್ಲಿನ ಮೂಲಕ ಆರಾದಿಸಲಾಗುತ್ತದೆ. ಈ ಹುಲಿ ಕಲ್ಲಿನ ಕ್ಷೇತ್ರದಲ್ಲಿ ಅಚಾತುರ್ಯಗಳೂ, ನೇಮ ನಡಾವಳಿಯ ಸಮಯ ಜೀವಂತ ಹುಲಿಯೊಂದು ಪಿಲಿಕಲ್ಲಿನ ಮೇಲೆ ಪ್ರತ್ಯಕ್ಷವಾಗಿತ್ತಿತ್ತು ಎಂಬುವುದು ಪ್ರತ್ಯಕ್ಷದರ್ಶಿಗಳ ಅಂಬೊಣ. ಇದಕ್ಕಾಗಿಯೇ ಕಲ್ಲಾಜಿಯಿಂದ ಕ್ಷೇತ್ರಕ್ಕೆ (2.5 ಕಿ.ಮಿ ದೂರÀ) ವೈಭವದಿಂದ ಭಂಡಾರ ತಂದು ಇಲ್ಲಿನ ದೈವಗಳ ಜತೆ ನರ್ತನ ಸೇವೆ ಅನುಭವಿಸಿ ಮತ್ತೆ ಕಲ್ಲಾಜೆಗೆ ಭಂಡಾರ ಹಿಂತಿರುಗಿಸುವುದು ರೂಢಿಯಲ್ಲಿದ್ದ ಸಂಪ್ರದಾಯ. ಅದೇ ರೀತಿ ವಾರ್ಷಿಕ ಕಾಲಾದಿ ಸಮಯದಲ್ಲಿ ಒಟ್ಲ ಪರಿಸರದಿಂದ ಕಲ್ಲಾಜೆಗೆ ಹೋಗಿ ಹರಕೆ ಸಲ್ಲಿಸುವುದು ವಿಶೇಷತೆ. ಇದರೊಂದಿಗೆ ಚಾಮುಂಡಿ, ಹುಲಿ ಹಾಗೂ ಹಂದಿ ರೂಪಗಳನ್ನು ಆರಾದಿಸಲಾಗುತ್ತದೆ. ಜೊತೆಗೆ ಗುಳಿಗ ಹಾಗೂ ಜುಮ್ರಾಲಿ ದೈವದ ಕಟ್ಟೆಗಳಿವೆ.

ಶ್ರೀ ಕ್ಷೇತ್ರ ಒಟ್ಲದಲ್ಲಿ 101 ದೈವಶಕ್ತಿಗಳು ಒಂದಡೆ ಇವೆಯೆಂದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಸೀಮೆಯ ಜನರು ತಮ್ಮ ಜನಾಂಗ, ಜಾತಿ ಎನ್ನದೆ ಯಾವುದೇ ಶುಭ ಸಂದರ್ಭದಲ್ಲಿ ಇಲ್ಲಿಗೆ ಮೊದಲು ಬಂದು ಎಲೆ ಅಡಿಕೆಯೊಂದಿಗೆ ಪ್ರಾರ್ಥಿಸಿ ಮತ್ತೆ ಊರಿಗೆ ಆಮಂತ್ರಣ ಕೊಡುವುದು ಇಂದಿಗೂ ಪ್ರಚಲಿತವಾಗಿರುವ ಸಂಗತಿ. ಕಾಲಘಟ್ಟದಲ್ಲಿ ಸುದೀರ್ಘ ಸುಖಜೀವನದೊಂದಿಗೆ ಬಳುವಳಿಯಾಗಿ ಬಂದ ಮೈಮರೆವೂ, ರಾಜಾಶ್ರಯದ ಕೋರತೆಯೋ, ಆಧುನಿಕತೆ ಸ್ವರ್ಷವೂ, ಇಚ್ಚಾಶಕ್ತಿಯ ಕೊರತೆಯೋ, ಒಟ್ಟಾರೆ ಶ್ರೀ ಕ್ಷೇತ್ರ ಒಟ್ಲಾ ಸ್ಥಳದ ಪ್ರಾಮುಖ್ಯತೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂರ್ಪಕಿಸಬಹುದು.
ಜನಾರ್ಧನ ಬಂಗೇರ – 9480903304
ಜಯರಾಮ್ ಬಂಗೇರ - 9480400857
ಅಶೋಕ್ ಬಂಗೇರ – 9738730048
ಉಮೇಶ್ ಬಂಗೇರ - 9741004111